Tuesday, July 07, 2009

’ನಿಂಗೆ ನಾನು ಇಷ್ಟಾನ ?’

ಗ್ಲಾಸನ್ನು ತುಟಿಯ ಮೇಲೆ ಉರುಳಿಸುತ್ತಾ, ಹೊರನೋಡುತ್ತಿದ್ದ. ಆಕಾಶದಲ್ಲಿ ಮುದ್ದಾಗಿ ಕಾಣಿಸುತ್ತಿದ್ದ ಚಂದ್ರನನ್ನು ನೋಡಿದ್ದೇ ಶ್ರಾವಣಿಯ ನೆನಪಾಗಿ, ಗ್ಲಾಸ್ ನ ತುಂಬಾ ವೈನ್ ತುಂಬಿಕೊಂಡು ಒಂದೇ ಬಾರಿಗೆ ಕುಡಿದು ಮುಗಿಸಿ ಮೇಜಿನ ಮೇಲಿಟ್ಟ.ಅವತ್ತು ಸಂಜೆ ನಡೆದ ಘಟನೆಯಿಂದ ಮಾನಸಿಕವಾಗಿ ಅವನು ಇನ್ನೂ ಹೊರಬಂದಿರಲಿಲ್ಲ. ಹೀಗೆಲ್ಲಾ ಆಗಬಹುದು ಅಂದುಕೊಂಡಿರಲಿಲ್ಲ. ಆದರೂ ನಡೆದು ಹೋಗಿತ್ತು.

--------

ಓನರ್ ಹೆಂಡತಿ ಮಾರ್ಕೆಟ್ ಗೆ ಹೊರಟು ನಿಂತಾಗ ಮನೆಯಲ್ಲಿ ಯಾರೂ ಇಲ್ಲ ಅಂತ ತನ್ನ ಪುಟ್ಟ ಮಗುವನ್ನು ಶ್ರಾವಣಿಯ ಬಳಿ ತಂದು ಬಿಟ್ಟು ಹೋಗಿದ್ದರು. ಶ್ರಾವಣಿ ಅದರ ಜೊತೆ ಮಾತಾಡ್ತಾ ನಿನ್ನ ಹೆಸರೇನು ಪುಟ್ಟ? ಎಂದು ಕೇಳಿದಳು.’ಪುಟ್ಟ....’ ಅಂದಿತು ಮಗು ಮುದ್ದು ಮುದ್ದಾಗಿ ಮುಖ ಮಾಡುತ್ತಾ. ನಗು ಬಂದಿತು ಶ್ರಾವಣಿಗೆ. ತಾನೂ ಚಿಕ್ಕವಳಿದ್ದಾಗ ಹೀಗೆ ಹೇಳುತ್ತಿದ್ದೆನೇನೋ ಅನಿಸಿತು. ಅಮ್ಮನ ಹೆಸರೇನು ? ಕೇಳಿದಳು ಮಗುವಿನ ಹತ್ತಿರ. ’ಅಮ್ಮ...’ಅಂದಿತು ಮಗು ರಾಗವಾಗಿ. ಮಕ್ಕಳು ಅಂದರೆ ಹೀಗೆ... ಎಷ್ಟೊಂದು ಮುಗ್ಧರು ಅಲ್ವಾ... ಅದಕ್ಕೇ ಮಕ್ಕಳು ಮನಸ್ಸಿಗೆ ಖುಷಿ ಕೊಡೋದು. ಮಗು ’ಆಂಟಿ’ಅಂತ ಕರೆದಾಗ ಮನಸ್ಸಿಗೆ ಏನೋ ಒಂಥಾರಾ ಹಿತ.

--------

ಹಾಸಿಗೆಯ ಮೇಲೆ ಎಷ್ಟು ಹೊರಳಾಡಿದರೂ ನಿದ್ರೆ ಬರುತ್ತಿಲ್ಲ ಅಂತ ಎದ್ದು ಕುಳಿತ. ಗಡಿಯಾರದ ಟಿಕ್ ಟಿಕ್ ಮಾತ್ರ ಕೇಳಿಸುತ್ತಿತ್ತು. ಆ ಸದ್ದು ಇಡೀ ನಿಶ್ಯಬ್ಧ ರಾತ್ರಿಯನ್ನೇ ತನ್ನ ಬೊಗಸೆಯಲ್ಲಿ ಹಿಡಿದಿಟ್ಟುಕೊಂಡಿರುವ ಅನುಭವ. ಥಟ್ಟನೆ ಅಮ್ಮನ ನೆನಪಾಯಿತು. ’ಅವತ್ತು ರಾತ್ರಿ ಸಹ ತಾನು ಹೀಗೆ ನಿದ್ರೆ ಬರದೆ ಎದ್ದಾಗ, ಪಕ್ಕದಲ್ಲಿ ಮಲಗಿದ್ದ ಅಮ್ಮ ಕಾಣಿಸದೇ ಅತ್ತಿದ್ದು, ಅಪ್ಪ-ಅಜ್ಜಿ ರಾತ್ರಿಯೇ ಇದೀ ಮನೆ, ಅಕ್ಕ ಪಕ್ಕ ಎಲ್ಲಾನೂ ಹುಡುಕಿ ನೆಂಟರು ಪರಿಚಯದವರಿಗೆಲ್ಲ ಫೋನ್ ಮಾಡಿ ವಿಚಾರಿಸಿದ್ದು, ರಾತ್ರಿ ಪೂರ್ತಿ ಅಳುತ್ತಲೇ ಇದ್ದ ನನ್ನನ್ನು ಬೆಳಿಗ್ಗೆ ಅತ್ತೆ ಬಂದು ತಬ್ಬಿ ಸಮಾಧಾನಿಸಿದಾಗ ಅಮ್ಮನಿಗಿಂತ ಅತ್ತೆಯೇ ಹೆಚ್ಚು ಆಪ್ತವಾಗತೊಡಗಿದ್ದು. ಎಲ್ಲವೂ ಹಾದು ಹೋಯಿತು. ’ಅಮ್ಮ ತನ್ನಿಂದ ಹೀಗೆ ದೂರವಾಗಿ ಬಿಡ್ತಾಳೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ ನಾನು. ಅಮ್ಮನಿಗೆ ಮನೆಯಲ್ಲಿ ಯಾವುದಕ್ಕು ತೊಂದರೆ ಇರಲಿಲ್ಲ. ಅಪ್ಪ-ಅಜ್ಜಿ ಇಬ್ಬರೂ ಒಳ್ಳೆಯವರೇ’ಅಂದು ಕೊಂಡಿದ್ದ ಅವನಿಗೆ ಆವತ್ತು ಅಜ್ಜಿ ಹಾಗೆಲ್ಲ ಹೇಳಬೇಕಿತ್ತೇ ?
’ಅವಳೇನೋ ಒಳ್ಳೆಯ ಹುಡುಗಿನೇ ಪಾಪ... ಎಷ್ಟು ದಿನ ನಿನ್ನ ಅಪ್ಪನ್ನ ಸಹಿಸಿಕೊಂಡಾಳು ? ಅದಕ್ಕೇ ಮನೆ ಬಿಟ್ಟು ಹೋದ್ಳು.’ ಅಜ್ಜಿ ಹೇಳಿದಾಗ ಅವನಿಗೆ ಮೊದಲ ಬಾರಿಗೆ ಆಘಾತ. ದೂರದಿಂದ ಗುಲಾಬಿ ಹೂ ಚಂದ ಅಂತ ಗಿಡ ಮುಟ್ಟಿದವನಿಗೆ ಮುಳ್ಳು ಕುಟುಕಿತ್ತು. ಅಪ್ಪ ಕೆಟ್ಟವರಾ? ಹಾಗಂತ ಅಜ್ಜಿ ಸ್ವತಃ ತಾನು ಹೆತ್ತ ಮಗನ ಬಗ್ಗೆನೇ ಹೇಳ್ತಿರಬೇಕಾದ್ರೆ ’ನಿಜ ಇರಬಹುದು’ ಅಂದು ಕೊಂಡಿದ್ದ. ’ಆದ್ರೂ ನನ್ನ ಚೆನಾಗೇ ನೋದಿಕೊಂದ್ರಲ್ಲ ಅಪ್ಪ. ಯಾವತ್ತೂ ಯಾವುದಕ್ಕೂ ಕಡಿಮೆ ಮಾಡಲಿಲ್ಲ. ನಾನು ಎಷ್ಟು ಕಲ್ಪಿಸಿಕೊಂಡರೂ ಅಪ್ಪ ಒಳ್ಳೆಯವರಾಗೇ ಕಾಣ್ತಾರೆ.’ ಅಂತ ಸುಮ್ಮನೆ ತಲೆ ಕೆಡಿಸಿಕೊಂಡಿದ್ದ. ರಾತ್ರಿ ಅಮ್ಮನನ್ನು ಹುಡುಕುವಾಗಿದ್ದ ಗಾಬರಿ, ಧಾವಂತ ಎಲ್ಲವೂ ಮೂರನೇ ದಿನವೇ ಮಾಯವಾಗಿ, ಅಪ್ಪ ಏನೂ ಆಗಿಯೇ ಇಲ್ಲ ಎಂಬಷ್ಟು ಆರಾಮವಾಗಿದ್ದುದು ನೆನಪಾಯ್ತು. ’ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೂರಬೇಡ.’ ಎಸ್.ಎಸ್.ಎಲ್.ಸಿ ಪರಿಕ್ಷೆಯ ಹಿಂದಿನ ದಿನ ಕನ್ನಡ ಮೇಡಂ ಹೇಳಿದ ಮಾತು ನೆನಪಾಗಿದ್ದೇ, ಎದ್ದು ಹೋಗಿ ಒಂದು ಲೋಟ ನೀರು ಕುಡಿದು ಬಂದ.

--------

ಊಟಕ್ಕೆ ಕೂತವಳಿಗೆ ಅನ್ನ ಕೆಳಗಿಳಿಯಲಿಲ್ಲ. ಎದ್ದು ಕೈ ತೊಳೆದಳು. ’ತಪ್ಪೆಲ್ಲವೂ ತನ್ನದೇನಾ ?’ ಅನಿಸುತ. ಚಿಕ್ಕಂದಿನಲ್ಲಿ ಮಾವಿನ ಮರ ಹತ್ತಲು ಹೋಗಿ ಬಿದ್ದು, ಮೈಯೆಲ್ಲಾ ಗಾಯ ಮಾಡಿಕೊಂಡು ಬಂದು ಅತ್ತಾಗ ಬೈದ ಅಮ್ಮನಿಗೆ ಅಳುತ್ತಲೇ,’ಅಣ್ಣ ಕರ್ಕೊಂಡು ಹೋದ’ಅಂದಾಗ ಅಮ್ಮ ’ನಿಂಗಾದ್ರೂ ಬುದ್ಧಿ ಬೇಕಿತ್ತಲ್ವ?’ ಅಂದಿದ್ದು ನೆನಪಾಯ್ತು. ಈಗ ಮತ್ಯಾರೋ ಅದನ್ನೇ ಹೇಳಿದ ಹಾಗಾಯಿತು. ’ಹೌದು ನಂಗೆ ಬುದ್ಧಿ ಬೇಕಿತ್ತು.’ ಹೇಳಿದಳು. ಧ್ವನಿ ಹೊರಬರಲಿಲ್ಲ. ಮಾತು ಕೊರಳೊಳಗೇ ಬಸಿದು ಹೋದಂತಿತ್ತು. ನಡೆದ ಘಟನೆಗಳ್ಲ್ಲ ಅವಳನ್ನು ಮತ್ತೆ ಕಾಡತೊಡಗಿದವು. ’ಅವನು - ತಾನು ಇಬ್ಬರೂ ಪ್ರೀತಿಸುತ್ತಿದ್ದುದು ನಿಜ; ಆದರೂ ತಾನು ಚೂರೂ ಪ್ರತಿರೊಧಿಸದೇ ಅಜ್ಜನ ಮನೆಯ ಸಂಕದ ಮೇಲೆ ನಡೆದು ಹೋದಂತೆ ಅವನೊಳಗೆ ಇಳಿದು ಹೋದದ್ದು ಸರಿ ಅಲ್ಲ.’ ಅನಿಸಿತು. ಯಾಕೋ ಇವತ್ತು ಮನಸು ತನ್ನ ಪರವಾಗಿ ಮಾತನಾಡುತ್ತಿಲ್ಲ ಅನ್ನಿಸಿ ಮೆಲ್ಲಗೆ ಅವುಗಳಿಂದ ನುಣುಚಿಕೊಂಡಳು

--------

ಅವನು ಹಾಸಿಗೆಯಲ್ಲಿ ಹೊರಳಾಡುತ್ತಲೇ ಇದ್ದ. ನಿದ್ದೆ ಬರಲೇ ಇಲ್ಲ. ಅವನು ತನ್ನ್ದೇನೂ ತಪ್ಪಿಲ್ಲ ಅಂತ ಮನಸಿಗೆ ಸಮಜಾಯಿಷಿ ನೀಡಿದ. ಅವಳ ನೆನಪು ಅವನನ್ನು ಸುತ್ತಿಕೊಂಡಾಗೆಲ್ಲ ಅವನು ಅದರಂದಿ ಕಳಚಿಕೊಳ್ಳಲು ಯತ್ನಿಸುತ್ತಿದ್ದ. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ.

--------

ಅವಳು ಮಲಗಲು ಹಾಸಿಗೆಯ ಬಳಿ ಬಂದಾಗ ಅವನು ಮತ್ತೆ ನೆನಪಾದ. ’ತುಂಬ ಒಳ್ಳೆಯವನು ಅವನು. ಆದರೂ... ಆದರೂ...’ ಅವಳು ಗೊಂದಲದಲ್ಲಿದ್ದಳು. ನಿದ್ರೆ ಬರಲಿಲ್ಲವಾದರೂ ಹಾಗೇ ಹಾಸಿಗೆಗೆ ಒರಗಿದಳು. ’ಆಫೀಸ್ನಲ್ಲಿ ಪರಿಚಯವಾದ ಇವನು ಈ ರೀತಿ ನನ್ನ ಬದುಕಿಗೆ ಬರ್ತಾನೆ ಅಂತ ಅಂದುಕೊಂಡಿರಲಿಲ್ಲ. ಒಂದು ವೇಳೆ ಮನೆಯಲ್ಲಿ ಈ ಮದುವೆಗೆ ಒಪ್ಪದೇ ಹೋದರೆ?’ ಅವನ ಮನೆಯಲ್ಲೂ ಒಪ್ಪಬೇಕಲ್ಲ... ಅವನು ನಾಳೆ ಏನೆನ್ನುತ್ತಾನೋ ನೋಡಿ ನಂತರ ಉಳಿದ ಮಿಷ್ಯ ಯೋಚಿಸಿದರಾಯಿತು. ಅಂದುಕೊಳ್ಳುತ್ತಾ ಪ್ರಯತ್ನಪೂರ್ವಕವಾಗಿ ಕಣ್ಣು ಮುಚ್ಚಿದಳು.

--------

ಬೆಳಿಗ್ಗೆ ಬೇಗ ಎದ್ದ ಅವನು ಎಂದಿನಂತೆ ಇರಲಿಲ್ಲ. ನಿನ್ನೆ ನಡೆದ ಘಟನೆ ಅವನನ್ನು ಅಷ್ಟೊಂದು ತಾಕಿದೆ ಅಂತ ಅವನಿಗೆ ಗೊತ್ತಾದದ್ದು ಆಗಲೇ. ಆಫೀಸಿಗೆ ಹೋಗೋದಿಕ್ಕೆ ಸಾಧ್ಯವಿಲ್ಲ ಅನಿಸಿತು. ಸ್ನಾನ, ತಿಂಡಿ ಎಲ್ಲ ಮುಗಿಸಿ ಸೀದಾ ಸಮುದ್ರ ತೀರದ ಕಡೆಗೆ ಹೆಜ್ಜೆ ಹಾಕಿದ. ಸೂರ್ಯನ ಬಿಸಿಲಿನ್ನೂ ಹೆಚ್ಚಾಗಿರಲಿಲ್ಲ. ಎಳೆ ಬಿಸಿಲು, ಸಮುದ್ರ ತೀರದ ಗಾಳಿ, ಮೈ ಸವರಿದಾಗ ಮನಸ್ಸಿಗೆ ಹಿತವೆನ್ನಿಸಿತು. ಅವನ ಪ್ರತಿ ನಿರ್ಧಾರ, ನೋವು-ನಲಿವುಗಳಿಗೆ ಜೊತೆಯಾದ ಸಮುದ್ರ ಅದು. ಹಾಗಾಗೇ ಆ ಸಮುದ್ರದ ಮೇಲೆ ತುಂಬಾ ಪ್ರೀತಿ ಅವನಿಗೆ.

--------

ಬೆಳಿಗ್ಗೆ ಆಫೀಸಿಗೆ ಹೋದ ಅವಳಿಗೆ ಅವನು ಬಂದಿಲ್ಲ ಅನ್ನೋದು ತಿಳಿದಾಗ ಆತಂಕ. ’ಅಯ್ಯೋ... ಅವನನ್ನೇ ನಂಬಿದ್ದೆ ನಾನು. ಯಾಕೆ ಹೀಗೆ ಮಾಡಿಬಿಟ್ಟ ?’ ಮನಸ್ಸಿನಲ್ಲೇ ಚಿಂತಿಸಿದಳು. ಉಳಿದವರ ಎದುರು ತನ್ನ ಆತಂಕ ವ್ಯಕ್ತಪಡಿಸುವಂತಿರಲಿಲ್ಲ. ಕೆಲಸದಲ್ಲೂ ಮನಸ್ಸು ತೊಡಗುತ್ತಿಲ್ಲ. ರಜೆ ಹಾಕಿ ಹೊರಟು ಬಿಡಬೇಕು ಅಂದು ಕೊಳ್ಳುತ್ತಾ ಬ್ಯಾಗ್ ಹೆಗಲಿಗೇರಿಸುತ್ತಿದ್ದಾಗ ಮೊಬೈಲ್ ರಿಂಗಾಯ್ತು. ನೋಡಿದರೆ ಅವನು. ಕಾಲ್ ಮಾಡಿದ ಅನ್ನೋ ಖುಷಿ. ಏನು ಹೇಳ್ತಾನೋ ಅನ್ನೋ ಗಾಬರಿ... ಕಾಲ್ ರಿಸೀವ್ ಮಾಡಿದಳು. ’ಹಲೋ... ನಾನು ಸುಮಿತ್’ ಅಂದ. ’ಹೂಂ ಹೇಳು...’ ಅಂದಳು. ’ನಿಂಗೆ ನಾನು ಇಷ್ಟಾನ ?’ ಕೇಳಿದ. ಮಾತಾಡಲಿಲ್ಲ. ’ಹೇಳು ಶ್ರಾವಣಿ’ ಅಂದಾಗ, ’ಹೂಂ’ ಎಂದಳು ತುಸು ಲಜ್ಜೆಯಲ್ಲಿ. ’ನಾಳೆ ಬೆಳಿಗ್ಗೆ ೯ ಗಂಟೆಗೆ ಗಣಪತಿ ದೇವಸ್ಥಾನದಲ್ಲಿ ಕಾಯ್ತಾ ಇರ್ತೀನಿ. ಬಂದ್ಬಿಡು.’ಅಂದ. ’ಸರಿ ಬರ್ತೀನಿ’ ಎಂದು ಫೋನ್ ಇಟ್ಟು ಕುರ್ಚಿಯಮೇಲೆ ಕುಳಿತ ಅವಳಿಗೆ ಮೊದಲು ಬಂದ ಯೋಚನೆ 'ತಾನು ಹೇಳಿದ್ದು ಸರೀನಾ ?'

ಕಿಟಕಿಯ ಆಚೆಯ ಗುಲಾಬಿ ತಲೆ ಆಡಿಸುತ್ತಿತ್ತು... :)

6 comments:

Ranjana Shreedhar 7/07/2009 11:57 PM  

ಹರ್ಷ...

ಬರಹ ತುಂಬಾ ತುಂಬಾ ಚೆನ್ನಾಗಿದೆ.
ಈ ತರಹದ್ದೇ ಗೊಂದಲದಲ್ಲಿ ಎಷ್ಟೋ ದಿನ ಕಳೆದಿರುವದರಿಂದ ಈ ಬರಹ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದದ್ದು ಅನ್ನಿಸಿತು..

ಕೆಲವೊಮ್ಮೆ ನಮ್ಮ ನಿರ್ಧಾರಗಳು, ಮನಸ್ಸಿನಲ್ಲೊಂದು ಗೊಂದಲ, ಭಯ ತರಿಸಿಬಿಡುತ್ತವೆ ಅನ್ನೋದನ್ನ ಕೊನೆಯ ಸಾಲಿನಲ್ಲಿ ಹೇಳಿದ್ದಿರ...

ಬರವಣಿಗೆಯ ಸ್ಟೈಲ್, ವಿಷಯವನ್ನ ಮನಮುಟ್ಟುವಂತೆ ಹೇಳುವ ರೀತಿ ತುಂಬಾ ಚೆನ್ನಾಗಿದೆ.

ಹೀಗೆ ಬರೆಯುತ್ತಿರಿ. ಓದಲು, ಮೆಚ್ಚಲು ನಾವಿದ್ದೇವೆ...

PRAKRIthi 7/12/2009 8:39 AM  

ಧಾಟಿ ತುಂಬಾ ಚೆನ್ನಗಿದೆ...
ಕಥೆ ಇಷ್ಟ ಆಯ್ತು...
ಇನ್ನೂ ಇಂಥ ಉತ್ತಮ ಕೃತಿ ನಿನ್ನಿಂದ ಹೊರ ಬರಲಿ....

ಶರಶ್ಚಂದ್ರ ಕಲ್ಮನೆ 7/25/2009 10:33 PM  

ಹರ್ಷ,
ನಿಮ್ಮ ಬರಹ ಇಷ್ಟವಾಯಿತು.. ಭಾವನೆಗಳನ್ನು ಚನ್ನಾಗಿ ಬಿಂಬಿಸಿದ್ದೀರಿ... ಹೀಗೆ ಬರಹಗಳು ಬರುತ್ತಿರಲಿ, ಹಂಸಗಾನ ಕೇಳುತ್ತಿರಲಿ... ಶುಭವಾಗಲಿ.

ಗೌತಮ್ ಹೆಗಡೆ 8/26/2009 5:57 AM  

hi harsha .baraha heege barta irli.style of writing chenagide.

ಗೌತಮ್ ಹೆಗಡೆ 10/23/2009 11:05 PM  

yaake enu bareetilla . tumba dina aaytu?

Karthik H.K 11/10/2009 6:37 AM  

hey chennagidyo! modalane saari odidaagle ishta aagittu. mattomme adara ola hora harivugalu hidisidavu. :)

Followers

ನಿಮ್ಮೊಂದಿಗೆ ಈ ಪುಟ ವೀಕ್ಷಿಸುತ್ತಿರುವವರು

How Do you like my Blog ???

ಅತಿಥಿಗಳು....

Recent Posts

’ಹಂಸಗಾನ’ದ ಇಹ ಪರ

ಇದು ನನ್ನ ಮನಸಿನ ಭಾವನೆಗಳನ್ನ, ಮನದ ತುಮುಲಗಳನ್ನ, ಹರಿವ ಭಾವನೆಗಳನ್ನ, ನನ್ನ ಭಾವುಕತೆಯನ್ನ, ಮನಸ್ಸಿಗೆ ತೋಚಿದ್ದನ್ನ ಗೀಚಿ ನಿಮ್ಮೊಂದಿಗೆ ಹಂಚುವ ಒಂದು ಸಣ್ಣ ಪ್ರಯತ್ನ. ಸಾಹಿತ್ಯ ಲೋಕಕ್ಕೆ ನನ್ನ ಕೈಲಾದ ಸಹಾಯ.. :)
ಮೊದಲಿನಿಂದಲೂ ಬರಹಗಳನ್ನ ಬರೀತಾ ಇದ್ದ ನಾನು ಬ್ಲೋಗ್ ಒಂದನ್ನ ಶುರು ಮಾಡಿದ್ದು, ನಾನ್ ಬರ್ಯೋದನ್ನ ನಾಲ್ಕ್ ಜನ ಓದಿ ಅವರ ಅಭಿಪ್ರಾಯ ತಿಳಿಸಲಿ, ಅದರಿಂದ ನಾನು ನನ್ನನ್ನ ಸುಧಾರಿಸ್ಕೋ ಬಹುದು ಅನೋ ಆಸೆ ಇಂದ... ಆ ಆಸೆಗೆ ಎಂದೂ ಮೋಸ ಆಗದಂತೆ ನೀವ್ ನೋಡ್ಕೋತಾ ಇದೀರ... ಧನ್ಯವಾದಗಳು...
ಇಲ್ಲಿ ನಾನು ದಿನಾ ಹೊಸ ಹೊಸ ಪೋಸ್ಟ್ ಹಾಕ್ತೀನಿ ಅಂತ ಹೇಳಲ್ಲ, ತೋಚಿದಾಗ ಗೀಚಿದ್ದನ್ನ, ಸಮಯ ಸಿಕ್ಕಾಗ ಬರೆದಿದ್ದನ್ನ, ಟೈಮ್ ಪಾಸ್ ಮಾಡೋಕೆ ಅಂತ ತೈಪ್ ಮಾಡಿದ್ದನ್ನ, ಸಮಯ ಸಿಕ್ಕಾಗ ನಿಮ್ಮ ಮುಂದೆ ಇಡೋಕೆ ಪ್ರಯತ್ನ ಮಾಡ್ತೀನಿ... ನೀವು ಓದಿ ನಿಮ್ ಅನಿಸಿಕೆನ ಬರೀತೀರ ಅಂತ ನನ್ನ ಭಾವನೆ...

ನಿಮ್ಮವ
-’ಪವಿ’

  © Blogger templates 'Sunshine' by Ourblogtemplates.com 2008

Back to TOP