Tuesday, July 07, 2009

’ನಿಂಗೆ ನಾನು ಇಷ್ಟಾನ ?’

ಗ್ಲಾಸನ್ನು ತುಟಿಯ ಮೇಲೆ ಉರುಳಿಸುತ್ತಾ, ಹೊರನೋಡುತ್ತಿದ್ದ. ಆಕಾಶದಲ್ಲಿ ಮುದ್ದಾಗಿ ಕಾಣಿಸುತ್ತಿದ್ದ ಚಂದ್ರನನ್ನು ನೋಡಿದ್ದೇ ಶ್ರಾವಣಿಯ ನೆನಪಾಗಿ, ಗ್ಲಾಸ್ ನ ತುಂಬಾ ವೈನ್ ತುಂಬಿಕೊಂಡು ಒಂದೇ ಬಾರಿಗೆ ಕುಡಿದು ಮುಗಿಸಿ ಮೇಜಿನ ಮೇಲಿಟ್ಟ.ಅವತ್ತು ಸಂಜೆ ನಡೆದ ಘಟನೆಯಿಂದ ಮಾನಸಿಕವಾಗಿ ಅವನು ಇನ್ನೂ ಹೊರಬಂದಿರಲಿಲ್ಲ. ಹೀಗೆಲ್ಲಾ ಆಗಬಹುದು ಅಂದುಕೊಂಡಿರಲಿಲ್ಲ. ಆದರೂ ನಡೆದು ಹೋಗಿತ್ತು.

--------

ಓನರ್ ಹೆಂಡತಿ ಮಾರ್ಕೆಟ್ ಗೆ ಹೊರಟು ನಿಂತಾಗ ಮನೆಯಲ್ಲಿ ಯಾರೂ ಇಲ್ಲ ಅಂತ ತನ್ನ ಪುಟ್ಟ ಮಗುವನ್ನು ಶ್ರಾವಣಿಯ ಬಳಿ ತಂದು ಬಿಟ್ಟು ಹೋಗಿದ್ದರು. ಶ್ರಾವಣಿ ಅದರ ಜೊತೆ ಮಾತಾಡ್ತಾ ನಿನ್ನ ಹೆಸರೇನು ಪುಟ್ಟ? ಎಂದು ಕೇಳಿದಳು.’ಪುಟ್ಟ....’ ಅಂದಿತು ಮಗು ಮುದ್ದು ಮುದ್ದಾಗಿ ಮುಖ ಮಾಡುತ್ತಾ. ನಗು ಬಂದಿತು ಶ್ರಾವಣಿಗೆ. ತಾನೂ ಚಿಕ್ಕವಳಿದ್ದಾಗ ಹೀಗೆ ಹೇಳುತ್ತಿದ್ದೆನೇನೋ ಅನಿಸಿತು. ಅಮ್ಮನ ಹೆಸರೇನು ? ಕೇಳಿದಳು ಮಗುವಿನ ಹತ್ತಿರ. ’ಅಮ್ಮ...’ಅಂದಿತು ಮಗು ರಾಗವಾಗಿ. ಮಕ್ಕಳು ಅಂದರೆ ಹೀಗೆ... ಎಷ್ಟೊಂದು ಮುಗ್ಧರು ಅಲ್ವಾ... ಅದಕ್ಕೇ ಮಕ್ಕಳು ಮನಸ್ಸಿಗೆ ಖುಷಿ ಕೊಡೋದು. ಮಗು ’ಆಂಟಿ’ಅಂತ ಕರೆದಾಗ ಮನಸ್ಸಿಗೆ ಏನೋ ಒಂಥಾರಾ ಹಿತ.

--------

ಹಾಸಿಗೆಯ ಮೇಲೆ ಎಷ್ಟು ಹೊರಳಾಡಿದರೂ ನಿದ್ರೆ ಬರುತ್ತಿಲ್ಲ ಅಂತ ಎದ್ದು ಕುಳಿತ. ಗಡಿಯಾರದ ಟಿಕ್ ಟಿಕ್ ಮಾತ್ರ ಕೇಳಿಸುತ್ತಿತ್ತು. ಆ ಸದ್ದು ಇಡೀ ನಿಶ್ಯಬ್ಧ ರಾತ್ರಿಯನ್ನೇ ತನ್ನ ಬೊಗಸೆಯಲ್ಲಿ ಹಿಡಿದಿಟ್ಟುಕೊಂಡಿರುವ ಅನುಭವ. ಥಟ್ಟನೆ ಅಮ್ಮನ ನೆನಪಾಯಿತು. ’ಅವತ್ತು ರಾತ್ರಿ ಸಹ ತಾನು ಹೀಗೆ ನಿದ್ರೆ ಬರದೆ ಎದ್ದಾಗ, ಪಕ್ಕದಲ್ಲಿ ಮಲಗಿದ್ದ ಅಮ್ಮ ಕಾಣಿಸದೇ ಅತ್ತಿದ್ದು, ಅಪ್ಪ-ಅಜ್ಜಿ ರಾತ್ರಿಯೇ ಇದೀ ಮನೆ, ಅಕ್ಕ ಪಕ್ಕ ಎಲ್ಲಾನೂ ಹುಡುಕಿ ನೆಂಟರು ಪರಿಚಯದವರಿಗೆಲ್ಲ ಫೋನ್ ಮಾಡಿ ವಿಚಾರಿಸಿದ್ದು, ರಾತ್ರಿ ಪೂರ್ತಿ ಅಳುತ್ತಲೇ ಇದ್ದ ನನ್ನನ್ನು ಬೆಳಿಗ್ಗೆ ಅತ್ತೆ ಬಂದು ತಬ್ಬಿ ಸಮಾಧಾನಿಸಿದಾಗ ಅಮ್ಮನಿಗಿಂತ ಅತ್ತೆಯೇ ಹೆಚ್ಚು ಆಪ್ತವಾಗತೊಡಗಿದ್ದು. ಎಲ್ಲವೂ ಹಾದು ಹೋಯಿತು. ’ಅಮ್ಮ ತನ್ನಿಂದ ಹೀಗೆ ದೂರವಾಗಿ ಬಿಡ್ತಾಳೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ ನಾನು. ಅಮ್ಮನಿಗೆ ಮನೆಯಲ್ಲಿ ಯಾವುದಕ್ಕು ತೊಂದರೆ ಇರಲಿಲ್ಲ. ಅಪ್ಪ-ಅಜ್ಜಿ ಇಬ್ಬರೂ ಒಳ್ಳೆಯವರೇ’ಅಂದು ಕೊಂಡಿದ್ದ ಅವನಿಗೆ ಆವತ್ತು ಅಜ್ಜಿ ಹಾಗೆಲ್ಲ ಹೇಳಬೇಕಿತ್ತೇ ?
’ಅವಳೇನೋ ಒಳ್ಳೆಯ ಹುಡುಗಿನೇ ಪಾಪ... ಎಷ್ಟು ದಿನ ನಿನ್ನ ಅಪ್ಪನ್ನ ಸಹಿಸಿಕೊಂಡಾಳು ? ಅದಕ್ಕೇ ಮನೆ ಬಿಟ್ಟು ಹೋದ್ಳು.’ ಅಜ್ಜಿ ಹೇಳಿದಾಗ ಅವನಿಗೆ ಮೊದಲ ಬಾರಿಗೆ ಆಘಾತ. ದೂರದಿಂದ ಗುಲಾಬಿ ಹೂ ಚಂದ ಅಂತ ಗಿಡ ಮುಟ್ಟಿದವನಿಗೆ ಮುಳ್ಳು ಕುಟುಕಿತ್ತು. ಅಪ್ಪ ಕೆಟ್ಟವರಾ? ಹಾಗಂತ ಅಜ್ಜಿ ಸ್ವತಃ ತಾನು ಹೆತ್ತ ಮಗನ ಬಗ್ಗೆನೇ ಹೇಳ್ತಿರಬೇಕಾದ್ರೆ ’ನಿಜ ಇರಬಹುದು’ ಅಂದು ಕೊಂಡಿದ್ದ. ’ಆದ್ರೂ ನನ್ನ ಚೆನಾಗೇ ನೋದಿಕೊಂದ್ರಲ್ಲ ಅಪ್ಪ. ಯಾವತ್ತೂ ಯಾವುದಕ್ಕೂ ಕಡಿಮೆ ಮಾಡಲಿಲ್ಲ. ನಾನು ಎಷ್ಟು ಕಲ್ಪಿಸಿಕೊಂಡರೂ ಅಪ್ಪ ಒಳ್ಳೆಯವರಾಗೇ ಕಾಣ್ತಾರೆ.’ ಅಂತ ಸುಮ್ಮನೆ ತಲೆ ಕೆಡಿಸಿಕೊಂಡಿದ್ದ. ರಾತ್ರಿ ಅಮ್ಮನನ್ನು ಹುಡುಕುವಾಗಿದ್ದ ಗಾಬರಿ, ಧಾವಂತ ಎಲ್ಲವೂ ಮೂರನೇ ದಿನವೇ ಮಾಯವಾಗಿ, ಅಪ್ಪ ಏನೂ ಆಗಿಯೇ ಇಲ್ಲ ಎಂಬಷ್ಟು ಆರಾಮವಾಗಿದ್ದುದು ನೆನಪಾಯ್ತು. ’ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಕೂರಬೇಡ.’ ಎಸ್.ಎಸ್.ಎಲ್.ಸಿ ಪರಿಕ್ಷೆಯ ಹಿಂದಿನ ದಿನ ಕನ್ನಡ ಮೇಡಂ ಹೇಳಿದ ಮಾತು ನೆನಪಾಗಿದ್ದೇ, ಎದ್ದು ಹೋಗಿ ಒಂದು ಲೋಟ ನೀರು ಕುಡಿದು ಬಂದ.

--------

ಊಟಕ್ಕೆ ಕೂತವಳಿಗೆ ಅನ್ನ ಕೆಳಗಿಳಿಯಲಿಲ್ಲ. ಎದ್ದು ಕೈ ತೊಳೆದಳು. ’ತಪ್ಪೆಲ್ಲವೂ ತನ್ನದೇನಾ ?’ ಅನಿಸುತ. ಚಿಕ್ಕಂದಿನಲ್ಲಿ ಮಾವಿನ ಮರ ಹತ್ತಲು ಹೋಗಿ ಬಿದ್ದು, ಮೈಯೆಲ್ಲಾ ಗಾಯ ಮಾಡಿಕೊಂಡು ಬಂದು ಅತ್ತಾಗ ಬೈದ ಅಮ್ಮನಿಗೆ ಅಳುತ್ತಲೇ,’ಅಣ್ಣ ಕರ್ಕೊಂಡು ಹೋದ’ಅಂದಾಗ ಅಮ್ಮ ’ನಿಂಗಾದ್ರೂ ಬುದ್ಧಿ ಬೇಕಿತ್ತಲ್ವ?’ ಅಂದಿದ್ದು ನೆನಪಾಯ್ತು. ಈಗ ಮತ್ಯಾರೋ ಅದನ್ನೇ ಹೇಳಿದ ಹಾಗಾಯಿತು. ’ಹೌದು ನಂಗೆ ಬುದ್ಧಿ ಬೇಕಿತ್ತು.’ ಹೇಳಿದಳು. ಧ್ವನಿ ಹೊರಬರಲಿಲ್ಲ. ಮಾತು ಕೊರಳೊಳಗೇ ಬಸಿದು ಹೋದಂತಿತ್ತು. ನಡೆದ ಘಟನೆಗಳ್ಲ್ಲ ಅವಳನ್ನು ಮತ್ತೆ ಕಾಡತೊಡಗಿದವು. ’ಅವನು - ತಾನು ಇಬ್ಬರೂ ಪ್ರೀತಿಸುತ್ತಿದ್ದುದು ನಿಜ; ಆದರೂ ತಾನು ಚೂರೂ ಪ್ರತಿರೊಧಿಸದೇ ಅಜ್ಜನ ಮನೆಯ ಸಂಕದ ಮೇಲೆ ನಡೆದು ಹೋದಂತೆ ಅವನೊಳಗೆ ಇಳಿದು ಹೋದದ್ದು ಸರಿ ಅಲ್ಲ.’ ಅನಿಸಿತು. ಯಾಕೋ ಇವತ್ತು ಮನಸು ತನ್ನ ಪರವಾಗಿ ಮಾತನಾಡುತ್ತಿಲ್ಲ ಅನ್ನಿಸಿ ಮೆಲ್ಲಗೆ ಅವುಗಳಿಂದ ನುಣುಚಿಕೊಂಡಳು

--------

ಅವನು ಹಾಸಿಗೆಯಲ್ಲಿ ಹೊರಳಾಡುತ್ತಲೇ ಇದ್ದ. ನಿದ್ದೆ ಬರಲೇ ಇಲ್ಲ. ಅವನು ತನ್ನ್ದೇನೂ ತಪ್ಪಿಲ್ಲ ಅಂತ ಮನಸಿಗೆ ಸಮಜಾಯಿಷಿ ನೀಡಿದ. ಅವಳ ನೆನಪು ಅವನನ್ನು ಸುತ್ತಿಕೊಂಡಾಗೆಲ್ಲ ಅವನು ಅದರಂದಿ ಕಳಚಿಕೊಳ್ಳಲು ಯತ್ನಿಸುತ್ತಿದ್ದ. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ.

--------

ಅವಳು ಮಲಗಲು ಹಾಸಿಗೆಯ ಬಳಿ ಬಂದಾಗ ಅವನು ಮತ್ತೆ ನೆನಪಾದ. ’ತುಂಬ ಒಳ್ಳೆಯವನು ಅವನು. ಆದರೂ... ಆದರೂ...’ ಅವಳು ಗೊಂದಲದಲ್ಲಿದ್ದಳು. ನಿದ್ರೆ ಬರಲಿಲ್ಲವಾದರೂ ಹಾಗೇ ಹಾಸಿಗೆಗೆ ಒರಗಿದಳು. ’ಆಫೀಸ್ನಲ್ಲಿ ಪರಿಚಯವಾದ ಇವನು ಈ ರೀತಿ ನನ್ನ ಬದುಕಿಗೆ ಬರ್ತಾನೆ ಅಂತ ಅಂದುಕೊಂಡಿರಲಿಲ್ಲ. ಒಂದು ವೇಳೆ ಮನೆಯಲ್ಲಿ ಈ ಮದುವೆಗೆ ಒಪ್ಪದೇ ಹೋದರೆ?’ ಅವನ ಮನೆಯಲ್ಲೂ ಒಪ್ಪಬೇಕಲ್ಲ... ಅವನು ನಾಳೆ ಏನೆನ್ನುತ್ತಾನೋ ನೋಡಿ ನಂತರ ಉಳಿದ ಮಿಷ್ಯ ಯೋಚಿಸಿದರಾಯಿತು. ಅಂದುಕೊಳ್ಳುತ್ತಾ ಪ್ರಯತ್ನಪೂರ್ವಕವಾಗಿ ಕಣ್ಣು ಮುಚ್ಚಿದಳು.

--------

ಬೆಳಿಗ್ಗೆ ಬೇಗ ಎದ್ದ ಅವನು ಎಂದಿನಂತೆ ಇರಲಿಲ್ಲ. ನಿನ್ನೆ ನಡೆದ ಘಟನೆ ಅವನನ್ನು ಅಷ್ಟೊಂದು ತಾಕಿದೆ ಅಂತ ಅವನಿಗೆ ಗೊತ್ತಾದದ್ದು ಆಗಲೇ. ಆಫೀಸಿಗೆ ಹೋಗೋದಿಕ್ಕೆ ಸಾಧ್ಯವಿಲ್ಲ ಅನಿಸಿತು. ಸ್ನಾನ, ತಿಂಡಿ ಎಲ್ಲ ಮುಗಿಸಿ ಸೀದಾ ಸಮುದ್ರ ತೀರದ ಕಡೆಗೆ ಹೆಜ್ಜೆ ಹಾಕಿದ. ಸೂರ್ಯನ ಬಿಸಿಲಿನ್ನೂ ಹೆಚ್ಚಾಗಿರಲಿಲ್ಲ. ಎಳೆ ಬಿಸಿಲು, ಸಮುದ್ರ ತೀರದ ಗಾಳಿ, ಮೈ ಸವರಿದಾಗ ಮನಸ್ಸಿಗೆ ಹಿತವೆನ್ನಿಸಿತು. ಅವನ ಪ್ರತಿ ನಿರ್ಧಾರ, ನೋವು-ನಲಿವುಗಳಿಗೆ ಜೊತೆಯಾದ ಸಮುದ್ರ ಅದು. ಹಾಗಾಗೇ ಆ ಸಮುದ್ರದ ಮೇಲೆ ತುಂಬಾ ಪ್ರೀತಿ ಅವನಿಗೆ.

--------

ಬೆಳಿಗ್ಗೆ ಆಫೀಸಿಗೆ ಹೋದ ಅವಳಿಗೆ ಅವನು ಬಂದಿಲ್ಲ ಅನ್ನೋದು ತಿಳಿದಾಗ ಆತಂಕ. ’ಅಯ್ಯೋ... ಅವನನ್ನೇ ನಂಬಿದ್ದೆ ನಾನು. ಯಾಕೆ ಹೀಗೆ ಮಾಡಿಬಿಟ್ಟ ?’ ಮನಸ್ಸಿನಲ್ಲೇ ಚಿಂತಿಸಿದಳು. ಉಳಿದವರ ಎದುರು ತನ್ನ ಆತಂಕ ವ್ಯಕ್ತಪಡಿಸುವಂತಿರಲಿಲ್ಲ. ಕೆಲಸದಲ್ಲೂ ಮನಸ್ಸು ತೊಡಗುತ್ತಿಲ್ಲ. ರಜೆ ಹಾಕಿ ಹೊರಟು ಬಿಡಬೇಕು ಅಂದು ಕೊಳ್ಳುತ್ತಾ ಬ್ಯಾಗ್ ಹೆಗಲಿಗೇರಿಸುತ್ತಿದ್ದಾಗ ಮೊಬೈಲ್ ರಿಂಗಾಯ್ತು. ನೋಡಿದರೆ ಅವನು. ಕಾಲ್ ಮಾಡಿದ ಅನ್ನೋ ಖುಷಿ. ಏನು ಹೇಳ್ತಾನೋ ಅನ್ನೋ ಗಾಬರಿ... ಕಾಲ್ ರಿಸೀವ್ ಮಾಡಿದಳು. ’ಹಲೋ... ನಾನು ಸುಮಿತ್’ ಅಂದ. ’ಹೂಂ ಹೇಳು...’ ಅಂದಳು. ’ನಿಂಗೆ ನಾನು ಇಷ್ಟಾನ ?’ ಕೇಳಿದ. ಮಾತಾಡಲಿಲ್ಲ. ’ಹೇಳು ಶ್ರಾವಣಿ’ ಅಂದಾಗ, ’ಹೂಂ’ ಎಂದಳು ತುಸು ಲಜ್ಜೆಯಲ್ಲಿ. ’ನಾಳೆ ಬೆಳಿಗ್ಗೆ ೯ ಗಂಟೆಗೆ ಗಣಪತಿ ದೇವಸ್ಥಾನದಲ್ಲಿ ಕಾಯ್ತಾ ಇರ್ತೀನಿ. ಬಂದ್ಬಿಡು.’ಅಂದ. ’ಸರಿ ಬರ್ತೀನಿ’ ಎಂದು ಫೋನ್ ಇಟ್ಟು ಕುರ್ಚಿಯಮೇಲೆ ಕುಳಿತ ಅವಳಿಗೆ ಮೊದಲು ಬಂದ ಯೋಚನೆ 'ತಾನು ಹೇಳಿದ್ದು ಸರೀನಾ ?'

ಕಿಟಕಿಯ ಆಚೆಯ ಗುಲಾಬಿ ತಲೆ ಆಡಿಸುತ್ತಿತ್ತು... :)

Monday, May 18, 2009

I'm going to be a BETTER person

It was 16:00hrs approximately may be, and i was awakened by the yapping of my cell phones ring in my ears. It was her call that woke me up. It has been long since i had stopped talking to her for some personal reasons... Some persons like her are of this sort, they keep calling u until u answer to their call and still if u dont answer to the call they will call you back again... And more over i couldn't ignore her. She sounded like a cat in heat..

I get up and start talking to her abt some wordly things going on around in life, and i find nothing imp that i can talk with her... So i asked her "So thn what special ? whats new ?".She says, is it possible for u to meet me now ??, and thn we meet up in our usual place in another 15 min. We sat there quietly for a long time in silence. Silence is the one thing i fell in love with since from the day i learnt the word LOVE. It gives me some sort of happiness, some kind of enjoyment. I enjoy Silence. Finally she starts talking and I was really shocked with what she told me..:) "I must have been out of my mind all these days. Look at you. Why don't you do something with your life ? Sit around in front of computer all day, you contribute nothing to society, you are just taking up space. How could i be with someone like you ?? "

I don knw from where in the world did that thing abt contributing to the society got into her mind, but all i knw for sure now is that the thing is killing me.. :) Since she raised that point i had to answer to that as i had to prove her wrong. So i said "I am trying to get myself involved in a work of helping old men and women. Kind of a helping hand for an "Old Age" home nearby that i knw. " Again it was her turn to blast me with her dialog. "You have a habit to get on these, 'I'm going to be a better person' kicks, then you always end up quiet and feeling down and bad about yourself. "

Well, thn i got angry, she got angry, we had a nice long fight abt each others right and wrongs, and thn finally whn it came to the matter of right and wrong in life, it was my turn to blast her with my dialogs... I don exactly remember what the conversation was abt whn she said this. "Sometimes roads less traveled are less traveled for a reason".. That really was a gr8 truth she said through out this conversation we had.. :)

After this conversation she and i just drifted apart, we navigated into some storming water and set sail for different horizon. And thn i realized, It's now that the expenses come anchoring into my Harbor.. :)

[ This complete conversation, write up is imaginary. This has nothing to do with any of the persons whom i knw :) ]

Thursday, April 30, 2009

ನಾನು ಇಲ್ಲಿ ನೊಂದುಕೊಂಡ್ರೆ ನೀನು ಅಲ್ಲಿ ಹೇಗೆ ಸುಖವಾಗಿರಬಲ್ಲೆ ?

ಇದನ್ನೆಲ್ಲ ನಿಂಗೆ ಹೇಳಲೇಬೇಕು ಅಂತೇನೂ ಇರಲಿಲ್ಲ.ಆದರೂ ಹೇಳದೇ ಇರೋಕೆ ನನ್ನಿಂದ ಆಗ್ತಾಯಿಲ್ಲ.ಈ ಮಟ್ಟಿಗೆ ನೀನು ನನ್ನ ವ್ಯಕ್ತಿತ್ವವನ್ನು ನನಗರಿವಿಲ್ಲದಂತೆಯೇ ಆವರಿಸಿಕೊಂಡಿದೀಯಾ ಅಂತ ನಂಗೆ ಗೊತ್ತಾದದ್ದೇ ಇವತ್ತು. ನನ್ನ ಕಣ್ಣಿಂದ ನೀನು ಮರೆಯಾದ ಮೇಲೇನೇ ನಂಗೆ ಗೊತ್ತಾಗಿರೋದು, ನೀನು ನನ್ನ ಹೃದಯದ ಒಳಗೆ ಇದ್ದೀಯಾಂತ.
ಯಾಕೋ ನೀನಿಲ್ಲದೇ ಇಡೀ ಬೆಂಗಳೂರು ಮೌನವಾಗಿ ಬಿಟ್ಟಿದೆ. ನಿನ್ನ ಕಣ್ಣ ಬೆಳಕಿಲ್ಲದೇ ಇರೋದ್ರಿಂದ ಆಕಾಶದಲ್ಲಿ ನಕ್ಷತ್ರಗಳೂ ಮಿನುಗ್ತಾಯಿಲ್ಲ. ನಿಜ ಹೇಳ್ಬೇಕು ಅಂದ್ರೆ ನೀನು ಊರಲ್ಲಿಲ್ಲ ಅನ್ನೋದು ಇಡೀ ಊರಿಗೇ ಗೊತ್ತಾಗಿಬಿಟ್ಟಿದೆ. ಆ ಹೂವಿನಂಗಡಿ ಹೆಂಗಸು ಸಹ ಕೇಳಿದಳು; ನನ್ನ, ನೀನು ಬರಲಿಲ್ಲ, ಯಾಕೆ ಅಂತ ? ಸತ್ಯವಾಗ್ಲೂ ಹೇಳ್ತಿದೀನಿ ನನಗಂತೂ ಎಲ್ಲರಿಗಿಂತ ಹೆಚ್ಚು ನೋವಾಗಿದೆ. ಜಗಳ ಮಾಡೋಕೆ, ಸುಳ್ಳು ಸುಳ್ಳೇ ಸಿಟ್ಟು ಮಾಡ್ಕೊಳೋಕೆ ಯಾರೂ ಇಲ್ಲ. ಫ್ಲರ್ಟ್ ಮಾಡೋಕೆ ಯಾರು ಸಿಗ್ತಾಯಿಲ್ಲ. ನನ್ನ ಹುಸಿ ಮುನಿಸನ್ನೂ ಅತೀ ಕಾಳಜಿಯಿಂದ ಗಮನಿಸಿ, ಮುದ್ದು ಮಾಡಿ ಸಂತೈಸೋ ಒಂದು ಜೀವವೂ ಕಾಣ್ತಿಲ್ಲ. ಆಫೀಸು ವಿಷಯಕ್ಕೆ ಸಿಟ್ಟು ಮಾಡ್ಕೊಂಡು ನಿನ್ನ ಮೇಲೆ ರೇಗಾಡಿದರೂ ತಪ್ಪು ತಿಳ್ಕೊಳ್ದೆ ನನ್ನ ಅರ್ಥ ಮಾಡ್ಕೊಂಡು, ನನಗೆ ಸಮಾಧಾನ ಮಾಡಿ, ನಿನ್ನ ನಗು ಮಾತಿನಿಂದ ನನ್ನ ಟೆನ್ಷನ್ ಎಲ್ಲಾನೂ ದೂರ ಮಾಡ್ತಿದ್ದೆ. ಒಮ್ಮೊಮ್ಮೆ ನಾನು ಏನೇನೋ ಮಾತಾಡಿದಾಗ ಗದರಿಸಿ ಬುದ್ಧಿ ಹೇಳಿ, ಆಮೇಲೆ ನನ್ನ ಜೊತೆ ಕೂತು ಅತ್ತಿದ್ದೆ, ನೆನಪಿದ್ಯಾ ? ಈಗ ನನ್ನ ಜೊತೆ ನನ್ನ ನೋವು-ನಲಿವುಗಳನ್ನು ಹಂಚಿಕೊಳ್ಳೋಕೆ ಯಾರೂ ಇಲ್ಲ. ನಾನು ತೀರಾ ಒಂಟಿ ಅನ್ನಿಸ್ತಿದೆ. ನೀನು ಬೇಗ ವಾಪಾಸ್ ಬಂದ್ಬಿಡು. ಕಾಯ್ತಾ ಇರ್ತೀನಿ. ನೀನು ಬರ್ತೀಯಾ ಅಂತ ನಂಗೆ ಚೆನ್ನಾಗ್ ಗೊತ್ತು. ನಾನು ಇಲ್ಲಿ ನೊಂದುಕೊಂಡ್ರೆ ನೀನು ಅಲ್ಲಿ ಹೇಗೆ ಸುಖವಾಗಿರಬಲ್ಲೆ ?
ನಿನಗನ್ನಿಸಬಹುದು, ಇಷ್ಟು ದಿನ ಜೊತೆಗೇ ಇದ್ದರೂ ಯಾವತ್ತೂ ಈ ರೀತಿ ಮಾತಾಡಿರಲಿಲ್ಲ ನಾನು. ಈಗ ಯಾಕೆ ಹಳೆಯದೆಲ್ಲ ನೆನಪು ಮಾಡ್ಕೊಂಡು ಈ ಥರ Emotional ಆಗಿ ಮಾತಾಡ್ತಿರಬಹುದು ಅಂತ ಅಂದ್ಕೊಳ್ತಿದೀಯೇನೋ... ಇವತ್ತು ಹುಣ್ಣಿಮೆ ಅಲ್ವಾ? ಹಾಗಾಗಿ ನೆನಪಾಯ್ತು. ಪ್ರತೀ ಹುಣ್ಣಿಮೆಯೂ ನನ್ನ ಪಾಲಿಗೆ ಅದ್ಭುತ. ನಾವಿಬ್ಬರೂ ಭೇಟಿಯಾಗಿದ್ದೂ ಸಹ ಹುಣ್ಣಿಮೆಯ ಸಂಜೇನೇ ಅಲ್ವ. ನಾನು ಹುಟ್ಟಿದ್ದೂ ಸಹ ಹುಣ್ಣಿಮೆಯೇ ಅಂತೆ, ಅಮ್ಮ ಹೇಳ್ತಿದ್ದರು. ನೀನು ನಂಗೆ ಜೊತೆಯಾದಮೇಲೆ ನನ್ನ ಪ್ರತೀ ಹುಣ್ಣಿಮೆ ಸಂಜೆಗೂ ಹೊಸ ಅರ್ಥ ಬಂತು. ನನ್ನ ಪಾಲಿಗೆ ಅವು ಕೇವಲ ಸಂಜೆಗಳಾಗಿರಲಿಲ್ಲ. ಬದುಕಿನ ಮಹೋನ್ನತ ಕ್ಷಣಗಳಾಗಿದ್ದುವು.ನದಿಯೆದುರು ಕುಳಿತು ಕಣ್ಮುಚ್ಚಿ ಕನಸು ಕಾಣೋದು, ಹರಿಯೋ ನೀರಿನ ಸದ್ದಿಗೆ ಕಿವಿಯಾಗೋದು, ತಂಗಾಳಿಗೆ ಮೈಯೊಡ್ಡಿ ಹಗುರಾಗುವುದು... ಈ ಸುಖದ ಮುಂದೆ ಬೇರೆ ಯಾವುದೂ ಇರಲಿಲ್ಲ. ಪ್ರತೀ ಹುಣ್ಣಿಮೆಯ ಸಂಜೆ ನಾವು ಜೊತೆಯಾಗಿ ಹೆಣೆದ ಕನಸುಗಳು ರಾಶಿ ಬಿದ್ದಿವೆ ಅಲ್ಲಿ. ಎಂದಿನಂತೆ ಕನಸು ಹೆಣೆಯೋಣ ಅಂತ ನದೀ ತೀರಕ್ಕೆ ಬಂದೆ. ಆದ್ರೆ ನೀನು ಜೊತೆಯಲ್ಲಿಲ್ಲ... ಕನಸುಗಳು ಸಾಥ್ ನೀಡಲಿಲ್ಲ. ಹಾಗೇ ತಂಗಾಳಿಗೆ ಮೈಯೊಡ್ಡಿ ಕುಳಿತಿದ್ದೆ. ನಿನ್ನ ನೆನಪು ಬಂತು. ನಿನ್ನ ತುಂಬಾ ಮಿಸ್ ಮಾಡಿಕೊಳ್ತಾ ಇದೀನಿ ನಾನು. ನಿನ್ನಿಂದ ಬೇರೆಯಾಗಲಾರದಷ್ಟು ಬೆರೆತು ಹೋಗಿದೀನಿ. ನೀನು ಬೇರೆ ಕಡೆ ಹೊಗಿರುವೆ ಎಂದು ಗೊತ್ತಾದ ಕ್ಷಣದಿಂದಲೇ ಮನಸ್ಸು ರಚ್ಚೆ ಹಿಡಿದಿದೆ. ಎಷ್ಟು ರಮಿಸಿದರೂ ನೀನು ಬೇಕು ಅಂತ ಒನ್ದೇ ಹಟ.. ನನ್ನ ಮನಸ್ಸಿಗೆ ನೋವು ಮಾಡಲ್ಲ ಅಲ್ವಾ ? ನೀನು ಬರ್ತೀಯಾ ಅಲ್ವಾ???


*-*-*
ಕನಸು ಹೆಣೆವ ಹುಡುಗಿ

Saturday, February 28, 2009

ಪ್ಲೀಸ್.. ಒಮ್ಮೆ ಬಂದು ಕಾರಣ ಹೇಳಿ ಹೊರಟು ಬಿಡು

ನಿಂಗೆ ನೆನಪೇ ಆಗುತ್ತಿಲ್ಲವಾ? ಮದುವೆಯಾದ ಹೊಸತರಲ್ಲಿ ನಾನು ನೀನು ಮಾಡಿಕೊಂಡ ಆಣೆಗಳು, ಆಡಿಕೊಂಡ ಮಾತುಗಳು...
"ಈ ಗಂಡಸರೆಲ್ಲಾ ಹೀಗೇನೇ ಕಣೇ" ಅಂತ ನನ್ ಫ್ರೆಂಡ್ ದೀಪ್ತಿ ಹೇಳಿದಾಗ ನಾನು ಈ generalised comment ನ ಒಪ್ಪಿಕೊಳ್ಳದೇ, "ನನ್ ಹುಡ್ಗ ಎಲ್ಲರ ಥರ ಅಲ್ಲ ಕಣೇ" ಅಂತ ಎಷ್ಟು ಖುಶಿಯಿಂದ ಹೇಳಿಕೊಂಡಿದ್ದೆ ಗೊತ್ತಾ? ಆದರೆ ನೀನು ನನ್ನ ಮಾತನ್ನು ಸುಳ್ಳು ಮಾಡಿಬಿಟ್ಟೆಯಲ್ಲೋ..
ಮದುವೆಯಾದ ಹೊಸತರಲ್ಲಿ ನಾವು ಎಷ್ಟು ಸಂತಸದಿಂದಿದ್ವಿ. ೨ ವರ್ಷಗಳಲ್ಲೇ ನಮ್ಮಿಬ್ಬರ ಸಂಬಂಧ ಇಷ್ಟು ಹಳಸಿ ಹೋಯ್ತಾ? ದಿಗ್ಭ್ರಮೆಯಾಗ್ತಿದೆ ನಂಗೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ವಿ ಅಂದುಕೊಂಡಿದ್ದೆಲ್ಲಾ ಯಾವತ್ತೂ ಸತ್ಯವೇ ಆಗಿರಲಿಲ್ವಾ? ಆಗೆಲ್ಲ ನಾವು ಎಷ್ಟು ಮುಕ್ತವಾಗಿ ಮಾತಡಿಕೊಳ್ತಿದ್ವಿ.. ನೀನು ನಿನ್ನ ಕಾಲೇಜಿನ ಬ್ಯೂಟಿ ಕ್ವೀನ್ ಬಗ್ಗೆ ಹೇಳ್ತಿದ್ದೆ, ನಾನು ನಂಗೆ ಪ್ರಪೋಸ್ ಮಾಡಿದ ಹುಡುಗನ ಬಗ್ಗೆ ಹೇಳಿದ್ದೆ.. ಇಬ್ಬರೂ ಮನಸು ಬಿಚ್ಚಿ ಮಾತಾಡ್ತಿದ್ವಿ, ನಗಾಡ್ತಿದ್ವಿ. ಅಷ್ಟು ಖಾಸಗಿ ವಿಷಯಗಳನ್ನು ಹಂಚಿಕೊಂಡ್ರೂ ಎಷ್ಟು ಪ್ರೀತಿಸ್ತಿದ್ವಿ.(ಅಥವಾ ಹಾಗೆ ಅಂದುಕೊಂಡಿದ್ವಿ) ಈ ೨ ವರ್ಷಗಳಲ್ಲಿ ನೀನಿಷ್ಟು ಬದಲಾಗಿಬಿಟ್ಟಿದ್ದು ನಂಗೆ ಗೊತ್ತೇ ಆಗಲಿಲ್ಲವಾ? ಅಥ್ವಾ ನೀನೇ ಸಡನ್ನಾಗಿ ಬದಲಾಗಿಬಿಟ್ಯಾ?

ನಾನು ಅವತ್ತು ನಿಂಗೆ ನನ್ನ ಫ್ರೆಂಡ್ ಮಧು ಬಗ್ಗೆ ಹೇಳಿದಾಗ ನೀನೇನಂದಿದ್ದೆ ನೆನಪು ಮಾಡಿಕೊ.. "ಚಿಕ್ಕಂದಿನಲ್ಲಿ ಮನಸ್ಸು ಮಾಗದ ವಯಸ್ಸಿನಲ್ಲಿ ನಡೆದ ದುರಂತಗಳಿಗೆ ಯಾರೂ ಹೊಣೆಯಲ್ಲ. ನಡೆಯುವಾಗ ಎಡವೋದು ಸಹಜಾನೇ. ಆದರೆ ಎಡವುತ್ತಲೇ ನಡೆಯೋದು ಸರಿಯಲ್ಲ" ಅಂತ. ನಿನ್ನ ಸ್ಪಷ್ಟ ಮಾತುಗಳಲ್ಲಿ ಅರ್ಥವಿತ್ತು.ನಂಗೂ ಅದು ಸರಿ ಅನಿಸಿತ್ತು. ನಿನ್ನ ಯೋಚನೆಯನ್ನು ಗೌರವಿಸುತ್ತಾ, ನಿನ್ನನ್ನು ಇನ್ನೂ ಹೆಚ್ಚು ಪ್ರೀತಿಸತೊಡಗಿದ್ದೆ.
ಈಗ ನೀನು ಹೀಗೆ ಹೇಳದೆ ಕೇಳದೆ ಹೊರಟು ಹೋದರೆ ನನಗ್ಯಾರು ಗತಿ? ನಿನ್ನನ್ನೆ ನಂಬಿ ನಿನ್ನ ಜೊತೆ ಬಾಳ ಹಾದಿಯಲ್ಲಿ ಹಿಂದಿರುಗಿ ಹೋಗಲಾರದಷ್ಟು ದೂರ ಬಂದು ಬಿಟ್ಟಿದ್ದೇನೆ. ಹೀಗೆ ಮಧ್ಯ ದಾರಿಯಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ನಡೆದರೆ ನಾನೇನು ಮಾಡಲಿ? ಬದುಕಿಗೇನು? ಹೇಗೋ ಸಾಗುತ್ತೆ. ನೀ ನಡೆಸಿದ ಹಳಿಗಳ ಮೇಲೆಯೇ. ಆದರೆ ನೀ ನನ್ನ ಬಿಟ್ಟು ಹೋಗಿದ್ದು ಯಾಕೆ ಅಂತ ಹೇಳು ಪ್ಲೀಸ್..
ನನ್ನನ್ನು ಕೆಣಕಿ ಕೇಳುವ ಈ ಸಮಾಜಕ್ಕೆ ಉತ್ತರ ಕೊಡ್ಲಿಕ್ಕೆ ಅಂತಾದ್ರೂ ಒಂದು ಕಾರಣ ಬೇಕಲ್ವ. ನಮ್ಮ ಮಧ್ಯೆ ಯಾವ ಜಗಳಾನೂ ಆಗಿರಲಿಲ್ಲ. ನಾನು ನಿನ್ನ ಪ್ರೀತಿಸಲಿಲ್ಲ ಅಂದ್ರೆ ನನ್ನನ್ನು ನಾನೇ ವಂಚಿಸಿಕೊಂಡ ಹಾಗೆ. ನಿಂಗೆ ನನ್ನ ಮೇಲೆ ಎನಾದರೂ ಅನುಮಾನ ಹುಟ್ಟಿಬಿಟ್ತಾ? ಅಥ್ವಾ ನಾನು ಬೋರ್ ಅನಿಸಿಬಿಟ್ತಾ? ಏನಾದರೂ ಹೇಳು. ಪಿಳ್ಳೆ ನೆಪವಾದರೂ ಸರಿ, ಸುಳ್ಳು ನೆವವಾದರೂ ಸರಿ. ನಾನು ನಿನ್ನ ಮಾತನ್ನು ನಂಬಿ ಬಿಡ್ತೀನಿ. ಇಲ್ಲಾಂದ್ರೆ ನೀನು ಯಾಕೆ ದೂರಾದೆ ಅನ್ನೋ ಕಾರಣ ತಿಳಿಯದೆ ಕೊರಗಿ ಬಿಡ್ತೀನಿ. ನನ್ನನ್ನು ಹಾಗೆ ಕಾಡಿಸುವಷ್ಟು ನಿರ್ದಯಿಯಲ್ಲ ನೀನು ಅಂದುಕೊಂಡಿದ್ದೀನಿ.
ನಂಗೊತ್ತು, ಪರಸ್ಪರ ಪ್ರೀತಿ ಇಲ್ಲದೆ ಒಂದೇ ಸೂರಿನಡಿ, ಒಬ್ಬರನ್ನೊಬ್ಬರು ವಂಚಿಸಿಕೊಳ್ತಾ ಬದುಕೋದು ಎಷ್ಟು ಹಿಂಸೆ ಅಂತ. ಹಾಗಾಗಿ ನಾನು ನಿನ್ನ ತಡೆಯೊಲ್ಲ, ಮತ್ತೇನು ಕೇಳೊದಿಲ್ಲ. ಪ್ಲೀಸ್..ಒಮ್ಮೆ ಬಂದು ಕಾರಣ ಹೇಳಿ ಹೊರಟು ಬಿಡು.

Monday, January 19, 2009

ನನಗೂ, ನಿನಗೂ ಕಣ್ಣಲ್ಲೇ ಪರಿಚಯ

ಕಂಗಳು ಮನಸ್ಸಿನ ಭಾವನೆಗಳಿಗೆ ಕನ್ನಡಿ ಅಂತಾರೆ, ಆದರೆ ನಿನ್ನದು ಕಂಗಳಲ್ಲಿ ನಿರ್ಲಿಪ್ತತೆಯಲ್ಲೋ ಹುಡುಗ ! ಯಾಕೋ ಹೀಗೆ ?, ನಿನ್ನ ಮನಸ್ಸಿನಲ್ಲಿ ಭವನೆಗಳೇ ಇಲ್ಲವೋ ಇಲ್ಲಾ, ಅವನ್ನು ವ್ಯಕ್ತ ಪಡಿಸದೇ ಇರಲು ಕಲಿತಿರುವೆಯಾ ? ಅಲ್ಲಾ ಕಣೋ ಅದು ಹೆಂಗೋ ಇರ್ತೀಯಾ ಯಾವುದೇ ಭಾವನೆಗಳನ್ನ್ನು ತೋರ್ಪಡಿಸದೆ ?
ಸಂಸವಾದರೆ ತುಟಿಯಂಚಿನಲ್ಲಿ ಮಿಂಚಿ ಮಾಯವಾಗುವ ನಗು, ಬೇಸರವಾದಾಗ ಅದೇ ತುಟಿಯಂಚಿನಲ್ಲಿ ನೀನು ಪ್ರಕಟಿಸುವ ನೆರಾಸೆ, ಬೇಸರ; ಆದರೂ ಸದಾ ನಿರ್ಲಿಪ್ತವಾಗಿರುವ ಆ ನಿನ್ನ ಕಂಗಳು ಇದೇ ಕಣೊ ನಂಗೆ ನಿನ್ನ ಬಗೆಗಿನ ಇಂತಹಾ ವ್ಯಾಮೋಹಕ್ಕೆ ಕಾರಣ, ಅದೇ ಕಣೋ ನಾನು ನಿನ್ನನ್ನು ಇಷ್ಟು ಪ್ರೀತಿಸಲು ಕಾರಣ. ಎಷ್ಟು ಹುದುಗರನ್ನು ನೋಡಿಲ್ಲ ನಾನು ? ಆದರೆ ಒಬ್ಬರೂ ನಿನ್ನಂತೆ ಅನ್ನುವ ಭಾವನೆಯೇ ಬರಲ್ಲ. ಅವರ ಕಂಗಳನ್ನು ದಿಟ್ಟಿಸುತ್ತಲೇ ತಿಳಿದು ಹೋಗುತ್ತದೆ ಅವರ ಮತ್ತು ನಿನ್ನ ನಡುವಿನ ಕಂದಕದ ವ್ಯತ್ಯಾಸ. ಅವರಾರು ನಿನ್ ತರಾ ಆಗೋಕೆ ಸಾಧ್ಯಾನೇ ಇಲ್ಲ.
ಅದೇಕೋ ಗೊತ್ತಿಲ್ಲ, ಈ ಪವಿಯ ಹೃದಯಕ್ಕೆ ನೀನು ತುಂಬ ಹತ್ತಿರ ಆಗ್ಬಿಟ್ಟೆ.ಮೊದಲ ದಿನ ನಿನ್ನ ಕಾಲೇಜಲ್ಲಿ ಕಂಡಾಗ "ಏನಪ್ಪಾ ಇವನು, ಈ ತರಾ ನಿರ್ಲಿಪ್ತ ಭಾವದವನು !!!" ಅಂತ ಒಳಗೊಳಗೇ ಅಂದುಕೊಂಡಿದ್ದ ನನಗೆ, ದಿನ ಕಳೆದಂತೆ ಒಳಗೊಳಗೇ ನೀನು ತುಂಬಾ ಇಷ್ಟ ಆಗ್ಬಿಟ್ಟೆ... ನಿನ್ನ ಎಂದೂ ಅತೀ ಎನಿಸದ ಆ ಅಭಿವ್ಯಕ್ತಿಸುವ ಕಲೆಯೇ ನನಗೆ ನೀನು ಇಷ್ಟ ಆಗೋಕೆ ಕಾರಣ.ನಿನ್ನ ನೋಡಿ, ಮನಸ್ಸು ಮುದಗೊಂಡು ನರ್ತಿಸಲು ಶುರುಮಾಡಿ ಇಂದಿಗೆ ವರ್ಷವೇ ಕಳೆದು ಹೋಯ್ತು. ಒಂದು ದಿನಾನು ನೀನು ನನ್ನನ್ನ ಮಾತಾದಿಸಲೇ ಇಲ್ಲ. ಇವತ್ತಿನ ತನಕ ಅಂತಹ ಒದು ಸುದಿನ ಬರಲೇ ಇಲ್ಲ. ಅದಕ್ಕೇ ನಾನೇ ಧೈರ್ಯ ಮಾಡಿ ನಿನಗೆ ಈ ಪತ್ರ ಬರೀತಾ ಇರೋದು...
ಮೊದಲು ನಿನ್ನ ನೋಡಿದ ದಿನ ನೀನು ನಿನ್ ಗ್ರೂಪ್ ನ ಗೆಳೆಯರ ಜೊತೆ ನಿಂತು ಹರಟ್ತಾ ಇದ್ದೆ. ಅವರೆಲ್ಲ ಬಿದ್ದು ಬಿದ್ದು ನಗ್ತಾ ಇದ್ರೂ ನೀನು ಮಾತ್ರ ಒಳ್ಳೆ ಬೊಕ್ಕ ಬಾಯಿಯ ಅಜ್ಜನತರ ತುಟಿಯಂಚಲ್ಲಿ ಮಾತ್ರ ನಗು ತಂದು ನಿರ್ಲಿಪ್ತ ಕಂಗಳಲ್ಲಿ ಅತ್ತಿತ್ತಾನೂ ನೋಡದೇ ನಿಂತಿದ್ದೆ... ಲೋ ನಿನ್ನಂತೋರ್ಗೂ ಗೆಳೆಯರು ಹೆಂಗೋ ಸಿಕ್ಕಿದ್ರು ? ಅಲ್ಲಾ ಕಣೋ ನಿಂಗೂ ನಿನ್ನ ಗೆಳೆಯರಿಗೂ ಅಜಗಜಾಂತರ ವ್ಯತ್ಯಾಸವಲ್ಲೋ.. ಬಿಡು ಅದೆಲ್ಲಾ ಕಟ್ಕೊಂಡು ನಂಗೆ ಆಗ್ಬೇಕಾಗಿರೋದಾದ್ರೂ ಏನು...!!! ಅಲ್ಲಾ ಕಣೊ ಎಷ್ಟು ಜನಾ ಹುಡ್ಗೀರೋ ನಿನ್ friends group ಅಲ್ಲಿ? ನಾನು ನಿನ್ನ ನೋಡೋವಾಗೆಲ್ಲ ನಿನ್ ಜೊತೆ ಇರೋ friendsಗಳಲ್ಲಿ most of them are girls. ನಿನ್ನ ಹಂಗೆ ನೋಡಿದಾಗೆಲ್ಲ ನನ್ನ ಎದೆಯಲ್ಲಿ ಅವಲಕ್ಕಿ ಕುಟ್ಟಿದ್ ಹಂಗೆ ಆಗುತ್ತೆ ಗೊತ್ತಾ? ನಿನ್ ಜೊತೆ ಇದಾರಲ್ಲ ಅವರನ್ನೆಲ್ಲಾ ನೋದ್ಕೋತೀನಿ ಒಂದ್ ಸಲಾ ನೀನ್ ನಂಗೆ ಸಿಕ್ಕಿದ್ ನಂತ್ರ.
ಸತ್ಯವಾಗ್ಲೂ ಹೇಳ್ತಾ ಇದೀನಿ. ನೀನು ಇವಳೆಂತಾ ಹುಚ್ಚು ಹುಡ್ಗೀನಪ್ಪಾ ಅಂದು ಕೊಂಡ್ರೂ ಪರವಾಗಿಲ್ಲ, ನಿನ್ನ ಆ ತುಂಟತನ, ಮಂದ ಸ್ಮಿತ ಮುಖ, ನಿನ್ ಡ್ರೆಸ್, ನಿಲ್ಲೋ ಸ್ಟೈಲ್ ಎಲ್ಲವೂ ನಂಗೆ ಇಷ್ಟ. ನಿನ್ನ ನೋಡಿದಾಗೆಲ್ಲಾ ಓಡಿ ಬಂದು ನಿನ್ನ ಮಡಿಲೊಳಗೆ ಮಗುವಾಗ ಬಿಡಬೇಕು, ನಿನ್ನ ಬಾಹುಗಳಲ್ಲಿ ಬಂದಿಯಾಗಬೇಕು, ನಿನ್ನ ಕೆನ್ನೆ ಚಿವುಟಿ; ತಲೆಗೂದಲೊಳಗೆ ಕೈ ಹಾಕಿ, ನಿನ್ನ ಎದೆ ಬಡಿತಕ್ಕೆ ಕಿವಿಯಾಗಬೇಕು ಅನಿಸುತ್ತೆ. ನಾನು ಹುಡ್ಗಿ, ನಿನ್ನ ಮಾತಾಡ್ಸೋದು, ಅದೂ friends ಜೊತೆ ಇರೋವಾಗ, ಎಷ್ಟು ಕಷ್ಟ ಅಂತ ಒಮ್ಮೆ ಅರ್ಥ ಮಾಡಿಕೋಬಾರದಾ ಹುಡುಗ ? ಆವತ್ತು ಕ್ಯಾಂಟೀನ್ ಹತ್ರ ನಿಂತು ಯಾರಲ್ಲೋ ಮಾತನಾಡುತ್ತಿದ್ದವನು ಒಮ್ಮೆ ಪಕ್ಕನೆ ತಿರುಗಿ ಕಣ್ಣಲ್ಲೇ ನುಂಗುವಂತೆ ನನ್ನ ನೋಡಿದೆಯಲ್ಲ, ನನ್ನ ಕೆನ್ನೆ ಕೆಂಪಾಗಿದ್ದು ನಿನಗೆ ಕಂಡಿರಬಹುದಾ ? ಒಮ್ಮೆ ಮಾತನಾಡಿಸೋ ಹುಡುಗಾ, ಬರೀ "ನಿನ್ನ ಹೆಸರೇನು?" ಅಂತ ಆದ್ರೂ ಕೇಳಬಾರದಾ ? ಮೌನವಾಗಿ ನನ್ನ ಕಾಡಬೇಡ. ನೀನು ನನ್ನನ್ನ ಪ್ರೀತಿಸು ಅಂತ ಯಾವತ್ತೂ ಕೇಳಲ್ಲ. ಆದರೆ ನನ್ನ ಈ ಬೆಟ್ಟದಷ್ಟು ಪ್ರೀತಿಗೆ ನಿನ್ನೆದೆಯಲ್ಲಿ ಪುಟ್ಟ ಜಾಗ ಕೊಡು ಸಾಕು. ಇದು ಬರೀ ಆಕರ್ಷಣೆಯಲ್ಲ ಕಣೋ ಆರಾಧನೆ, ಅರ್ಥ ಮಾಡ್ಕೋ. ನಾನು ನಿನ್ನ ನೋಡೋವಾಗೆಲ್ಲಾ ನೀನು ನನ್ನ ಯಾಕೋ ಹಾಗೆ ನೊಡ್ತಾ ಇರ್ತೀಯ ? ಇತ್ತೀಚೆಗೆ ನಾನು ಗುಂಪು ಕಂಡಲ್ಲಿ ನಿನ್ನನ್ನೇ ಹುಡ್ಕೋಕೆ ಶುರು ಮಾಡಿ ಬಿಟ್ಟಿದೀನಿ.
ನನ್ class mates ಆಡ್ಕೋತಾರೆ ನಾನ್ ನಿನ್ನ ಇಷ್ಟ ಪಡ್ತಾ ಇದೀನಿ ಅಂತ. ಆದ್ರೆ ನಂಗೆ ನೀನು ಅಂದ್ರೆ ಎಷ್ಟು ಇಷ್ಟ ಅಂತ ಅವ್ರಿಗೇನು ಗೊತ್ತು ? ಅವರ್ಗೆಲ್ಲಾ ನೀನು ನಿರ್ಭಾವುಕ, ನನಗೆ ಮಾತ್ರ ನೀನು ಭಾವನೆಗಳ ಮೇಲೆ ಹತೋಟಿ ಇರೋ ಸರದಾರ. ಅದಿಕ್ಕೇ ಹೇಳೋದು, ’ಅವರವರ ಭಾವಕ್ಕೆ, ಅವರವರ ಭಕುತಿಗೆ’ ಅಂತ... ಏಕೋ ಗೊತ್ತಿಲ್ಲ, ನಾನು ನಿನ್ನನ್ನ ನೋಡಿದಾಗೆಲ್ಲ ’ಒಮ್ಮೆ ನೀನು ನನ್ನ ಇಷ್ಟ ಪಟ್ರೆ, ನನ್ನಿಂದ ಎಂದೂ ದೂರಾಗಲ್ಲ’ ಎಂಬ ಭಾವನೆ ಬರ್ತಾನೇ ಇರುತ್ತೆ. ನಿನ್ನ ಮಾತಾಡಿಸ್ಬೇಕು ಅಂತ ಅದೆಷ್ಟು ಸಲ ಅಂದ್ಕೊಂಡಿದೀನೋ ಗೊತ್ತಿಲ್ಲ, ನೀನು ಮಾತಾಡಿಸ್ತೀಯೇನೋ ಅನ್ನೋ ಭಾವನೆಯ ಜೊತೆ, ನಿನ್ನ ಮಾತಾಡಿಸ್ಬೇಕು ಅನ್ನೋ ಆಸೆನೂ ಮನಸ್ಸಿಗೆ ಬರ್ತಾನೆ ಇರುತ್ತೆ. ಆದರೆ ನೀನೋ ಕೃಷ್ಣನ ತರ ಸದಾ ಗೋಪಿಕಾ ಸ್ತ್ರೀಯರ ನಡುವೆನೇ ಇರ್ತೀಯಾ... ಥು, ನಾಚ್ಗೆ ಆಗಲ್ವಾ ನಿಂಗೆ?
ಅಂದಂಗೆ ನಿಂಗೆ Metallica ಮತ್ತೆ Iron Maiden ಇಷ್ಟಾ ಅಂತ ನನ್ friend ಹೇಳಿದ್ಲು. ಅಲ್ಲಾಲೋ, ಹೆಂಗೋ ಕೇಳ್ತೀಯಾ ಆ ಕಿವಿ ತಮಟೆ ತೂತ್ ಆಗೋ ತರ ಇರೋ ಮ್ಯೂಸಿಕ್ ಅನ್ನ ? ಈ ಪತ್ರ ಓದಿದ್ ನಂತ್ರ ಆದ್ರು ಸ್ವಲ್ಪ Romantic songs ಕೇಳೊ ಅಭ್ಯಾಸ ಮಾಡ್ಕೊ.
ಒಮ್ಮೆ ಕೂಡ ಒಂದು ಚಿಕ್ಕ ಮಾತೂ ಸಹ ಆಡದೆ ಇಬ್ಬರ ಮಧ್ಯ ಪ್ರೀತಿ ಹುಟ್ಟೋಕೆ ಸಾಧ್ಯಾನಾ ? ಅಂತ. ಹಾಗಂತ ನಂಗೆ ನನ್ನ ಪ್ರೀತಿಯ ಬಗ್ಗೆ ನಂಬಿಕೆ ಇಲ್ಲ ಅಂತಲ್ಲ. ಆದರೆ ಬರಿ ಕಂಗಳಲ್ಲೇ ಪ್ರೀತಿ ಹುಟ್ಟುತ್ತಾ? ಇವೆಲ್ಲಾ ಪ್ರಶ್ನೆಗಳ ಉತ್ತರದ ಹಂಗು ನನ್ನ ಪ್ರೀತಿಗಿಲ್ಲ ಹುಡುಗಾ. ನನ್ನ ಪ್ರೀತಿ ಹಾಗೆ, ಹೀಗೆ ಅಂತೆಲ್ಲಾ ಸುಮ್ನೆ ಯಾಕೆ ಹೇಳಲಿ ? ನೇರವಾಗಿ ಹೇಳ್ತೀನಿ ಕೇಳು. ನನ್ನ ಪ್ರೀತಿಗೆ ಹೋಲಿಕೆ ಎಂದರೆ ಅಮ್ಮನ ಮಮತೆ ಒಂದೇ. ನಂಗೊತ್ತು, ಒಬ್ಬ ವ್ಯಕ್ತಿ ಇನ್ನೊಬ್ಬನ್ನ ಈ ಮಟ್ಟಿಗೆ ಪ್ರೀತಿಸೋದನ್ನ ಊಹಿಸಿಕೊಳ್ಳೋದೂ ತುಂಬಾ ಕಷ್ಟ. ಆದ್ರೆ ಇದು ನಿಜ.
ನನ್ನ ಪ್ರೀತಿಯನ್ನು ಮೊಗೆದು ಮೊಗೆದು ನಕ್ಷತ್ರಗಳಲ್ಲಿ ತುಂಬಿ ಕಳಿಸ್ತೀನಿ ನಿಮ್ಮ ಮನೆಗೆ. ನೀನು ಒಮ್ಮೆ ಹೊರಬಂದು ಆಗಸದತ್ತ ನೋಡು. ಇಲ್ಲಿ ನಾನು ನಿನ್ನ ನೆನಪಲ್ಲೇ ದಿಂಬು ತಬ್ಬಿಕೊಂಡು ಮಲಗಿರುತ್ತೇನೆ...

-- ’ಪವಿ’

Followers

ನಿಮ್ಮೊಂದಿಗೆ ಈ ಪುಟ ವೀಕ್ಷಿಸುತ್ತಿರುವವರು

How Do you like my Blog ???

ಅತಿಥಿಗಳು....

Recent Posts

’ಹಂಸಗಾನ’ದ ಇಹ ಪರ

ಇದು ನನ್ನ ಮನಸಿನ ಭಾವನೆಗಳನ್ನ, ಮನದ ತುಮುಲಗಳನ್ನ, ಹರಿವ ಭಾವನೆಗಳನ್ನ, ನನ್ನ ಭಾವುಕತೆಯನ್ನ, ಮನಸ್ಸಿಗೆ ತೋಚಿದ್ದನ್ನ ಗೀಚಿ ನಿಮ್ಮೊಂದಿಗೆ ಹಂಚುವ ಒಂದು ಸಣ್ಣ ಪ್ರಯತ್ನ. ಸಾಹಿತ್ಯ ಲೋಕಕ್ಕೆ ನನ್ನ ಕೈಲಾದ ಸಹಾಯ.. :)
ಮೊದಲಿನಿಂದಲೂ ಬರಹಗಳನ್ನ ಬರೀತಾ ಇದ್ದ ನಾನು ಬ್ಲೋಗ್ ಒಂದನ್ನ ಶುರು ಮಾಡಿದ್ದು, ನಾನ್ ಬರ್ಯೋದನ್ನ ನಾಲ್ಕ್ ಜನ ಓದಿ ಅವರ ಅಭಿಪ್ರಾಯ ತಿಳಿಸಲಿ, ಅದರಿಂದ ನಾನು ನನ್ನನ್ನ ಸುಧಾರಿಸ್ಕೋ ಬಹುದು ಅನೋ ಆಸೆ ಇಂದ... ಆ ಆಸೆಗೆ ಎಂದೂ ಮೋಸ ಆಗದಂತೆ ನೀವ್ ನೋಡ್ಕೋತಾ ಇದೀರ... ಧನ್ಯವಾದಗಳು...
ಇಲ್ಲಿ ನಾನು ದಿನಾ ಹೊಸ ಹೊಸ ಪೋಸ್ಟ್ ಹಾಕ್ತೀನಿ ಅಂತ ಹೇಳಲ್ಲ, ತೋಚಿದಾಗ ಗೀಚಿದ್ದನ್ನ, ಸಮಯ ಸಿಕ್ಕಾಗ ಬರೆದಿದ್ದನ್ನ, ಟೈಮ್ ಪಾಸ್ ಮಾಡೋಕೆ ಅಂತ ತೈಪ್ ಮಾಡಿದ್ದನ್ನ, ಸಮಯ ಸಿಕ್ಕಾಗ ನಿಮ್ಮ ಮುಂದೆ ಇಡೋಕೆ ಪ್ರಯತ್ನ ಮಾಡ್ತೀನಿ... ನೀವು ಓದಿ ನಿಮ್ ಅನಿಸಿಕೆನ ಬರೀತೀರ ಅಂತ ನನ್ನ ಭಾವನೆ...

ನಿಮ್ಮವ
-’ಪವಿ’

  © Blogger templates 'Sunshine' by Ourblogtemplates.com 2008

Back to TOP